ಲೇಖನ ಚಿಹ್ನೆಗಳು ( lekhana chinhegalu in kannada ) : ನಮ್ಮ ವಿಚಾರಗಳನ್ನು,ಭಾವನೆಗಳನ್ನು ಬರವಣಿಗೆಯಲ್ಲಿ ತಿಳಿಪಡಿಸಲು ‘ಲೇಖನ ಚಿಹ್ನೆಗಳು’ ‘punctuation marks’ ಅವಶ್ಯಕವಾಗಿವೆ.
ನಮ್ಮ ವಿಚಾರಗಳನ್ನು, ಭಾವನೆಗಳನ್ನು ಪರರಿಗೆ ತಿಳಿಸುವಾಗ ಮಾತಿನ ಮೂಲಕ, ಧ್ವನಿಯ ಏರಿಳಿತದ ಮೂಲಕ ಅಥವಾ ಮುಖ ಭಾವಗಳಿಂದ ವ್ಯಕ್ತಪಡಿಸುತ್ತೇವೆ. ಹಾಗೆಯೇ ಬರವಣಿಗೆಯಲ್ಲಿ ಅವನ್ನು ತಿಳಿಪಡಿಸುವಾಗ ಕೆಲವು ಲೇಖನ ಸಂಕೇತಗಳನ್ನು ಉಪಯೋಗಿಸಬೇಕಾಗುತ್ತದೆ.
ಆಗ ನಮ್ಮ ವಿಚಾರ ಭಾವನೆಗಳು ಪರರಿಗೆ ಸ್ಪಷ್ಟವಾಗಿ ಅರ್ಥವಾಗುತ್ತವೆ; ಇಲ್ಲವಾದರೆ ಅರ್ಥ ಸ್ಪಷ್ಟವಾಗದೆ ಗೊಂದಲಕ್ಕೀಡಾಗಬಹುದು ; ಅಥವಾ ಅಪಾರ್ಥವಾಗಿ ಅನರ್ಥವಾಗಬಹುದು. ಕಾರಣ ಅಂತ ವಿಚಾರ,ಭಾವನೆ ,ಅರ್ಥ ಸ್ಪಷ್ಟತೆಗಳಿಗೆ ಇಂಥ ‘ಲೇಖನ ವಿರಾಮ ಚಿಹ್ನೆಗಳು’ ಅವಶ್ಯಕವಾಗಿವೆ.
ಲೇಖನ ಚಿಹ್ನೆಗಳು in kannada
lekhana chinhegalu in kannada : ಲೇಖನ ಚಿಹ್ನೆಗಳು ಬಳಕೆಯಾದುದು ಪ್ರಾಚೀನ ತಾಡವೋಲೆ, ಗ್ರಂಥ,ಶಾಸನ, ತಾಮ್ರಪಟ,ಶಿಲಾಲಿಪಿಗಳಲ್ಲಿ ಕಂಡು ಬರುವುದಿಲ್ಲ.ಅನಂತರದ ಇತ್ತೀಚಿನ ಕಾಲದಲ್ಲಿ ಕನ್ನಡದಲ್ಲಿ ಗದ್ಯಸಂಪತ್ತು ಹೆಚ್ಚಿದಂತೆ ಆಂಗ್ಲಭಾಷಾ ಸಾಹಿತ್ಯ ಪ್ರಭಾವದಿಂದ ಕನ್ನಡ ಭಾಷಾ ಬರವಣಿಗೆಯಲ್ಲಿಯೂ ಲೇಖನ ವಿರಾಮ ಚಿಹ್ನೆಗಳ ಬಳಕೆ ರೂಡಿಯಲ್ಲಿ ಬರತೊಡಗಿತು.
ಅದರಿಂದ ಲೇಖನವನ್ನು ಓದುವಾಗ ಎಲ್ಲೆಲ್ಲಿ ಎಷ್ಟೆಷ್ಟು ಸಮಯ ನಿಲ್ಲಬೇಕು,ಧ್ವನಿಯ ಏರಿಳಿತ ಹೇಗಿರಬೇಕು ಮೊದಲಾದವು ಓದುಗನ ಮನಸ್ಸಿನಲ್ಲಿ ಸರಿಯಾಗಿ ಮೂಡುತ್ತವೆ.ಮತ್ತು ಅದ್ರಿಂದ ಲೇಖನದ ವಿಚಾರ ,ಅರ್ಥಗಳು ಓದುಗನ ಹೃದಯ ತಲುಪುತ್ತವೆ.
ಹೀಗಾಗಿ ಬರವಣಿಗೆಯಲ್ಲಿ ವಿರಾಮ ಚಿಹ್ನೆಗಳು ಅತ್ಯಂತ ಪರಿಣಾಮಕಾರಿ ಆಗಿವೆ.ಇಂಥ ಲೇಖನ ವಿರಾಮ ಚಿಹ್ನೆಗಳು ಶಬ್ದಗಳ ಮುಂದೆ, ವಾಕ್ಯ ಮಧ್ಯದಲ್ಲಿ ಅಥವಾ ವಾಕ್ಯದ ಕೊನೆಗೆ ಬರುತ್ತವೆ.
ಲೇಖನ ಚಿಹ್ನೆಗಳು ಯಾವುವು? lekhana chinhegalu in kannada
ಲೇಖನ ವಿರಾಮ ಚಿಹ್ನೆಗಳು ಶಬ್ದಗಳ ಮುಂದೆ, ವಾಕ್ಯ ಮಧ್ಯದಲ್ಲಿ ಅಥವಾ ವಾಕ್ಯದ ಕೊನೆಗೆ ಬರುತ್ತವೆ.
ಲೇಖನ ಚಿಹ್ನೆಗಳು ಈ ಕೆಳಗಿನಂತಿವೆ –
ಪೂರ್ಣ ವಿರಾಮ ಚಿಹ್ನೆ(.)
ಅಲ್ಪ ವಿರಾಮ ಚಿಹ್ನೆ( ,)
ಪ್ರಶ್ನಾರ್ಥಕ ಚಿಹ್ನೆ (?)
ಭಾವಸೂಚಕ ಚಿಹ್ನೆ(!)
ಉದ್ಧರಣ ಚಿಹ್ನೆ(“-“) (‘-‘)
ಆವರಣ ಚಿಹ್ನೆ()
ವಿವರಣಾತ್ಮಕ ಚಿಹ್ನೆ(:) (-) (:-)
ಪೂರಕಾರ್ಥಕ ಚಿಹ್ನೆ(-)
ಮಿಲನ ಚಿಹ್ನೆ(+)
ಸಮಾನಾರ್ಥಕ ಚಿಹ್ನೆ(=)
ವಿರೋಧಾರ್ಥಕ ಚಿಹ್ನೆ(x )
ವಿಭಾಜಕ ಚಿಹ್ನೆ(/)
ಹಂಸಪಾದ ಚಿಹ್ನೆ(^)
ಅಡಿಟಿಪ್ಪಣಿ ಚಿಹ್ನೆ(*)
ಲೇಖನ ಚಿಹ್ನೆಗಳು ಎಂದರೇನು? ಮತ್ತು ಲೇಖನ ಚಿಹ್ನೆಗಳಿಗೆ ಉದಾಹರಣೆಗಳನ್ನು (punctuation mark example) ನಾವು ಕೆಳಗಿನಂತೆ ತಿಳಿಯೋಣ.
ಪೂರ್ಣ ವಿರಾಮ ಚಿಹ್ನೆ (.)
ಪೂರ್ಣ ವಿರಾಮ ಚಿಹ್ನೆಯನ್ನು Full stop ಎಂದು ಕರೆಯುತ್ತಾರೆ. ವಾಕ್ಯದಲ್ಲಿಯ ಕ್ರಿಯೆಯು ಪೂರ್ಣವಾದುದನ್ನು ಸೂಚಿಸುವ ಕ್ರಿಯಾಪದದ ಮುಂದೆ ಈ ಪೂರ್ಣವಿರಾಮ ಚಿಹ್ನೆಯು ಬರುತ್ತದೆ. ಸಾಮಾನ್ಯವಾಗಿ ಇದು ವಾಕ್ಯದ ಕೊನೆಗೆ ಬಂದು,ವಾಕ್ಯ ಪೂರ್ಣಗೊಂಡುದನ್ನು ಸೂಚಿಸುತ್ತದೆ.
ಉದಾಹರಣೆ- ಮಕ್ಕಳು ಶಾಲೆಗೆ ಹೋದರು.ಈ ವಾಕ್ಯದಲ್ಲಿ ಹೋಗುವ ಕ್ರಿಯೆಯು ಹೋದರು ಎಂಬ ಕ್ರಿಯಾಪದದಿಂದ ಪೂರ್ಣಗೊಳ್ಳುತ್ತದೆ. ಆದ್ದರಿಂದ ಹೋದರು ಶಬ್ದದ ಮುಂದೆ ಪೂರ್ಣ ವಿರಾಮ ಚಿಹ್ನೆ ಬಂದಿದೆ.
ಅರ್ಧವಿರಾಮ ಚಿಹ್ನೆ (;)
ಅರ್ಧವಿರಾಮ ಚಿಹ್ನೆಯನ್ನು Semi- colon ಎಂದು ಕರೆಯುತ್ತಾರೆ.ಒಂದು ಪ್ರಧಾನ ವಿಚಾರವಾಕ್ಯದಡಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸ್ವತಂತ್ರ ವಾಕ್ಯಗಳು ಬಂದಾಗ ಆ ಸ್ವತಂತ್ರ ವಾಕ್ಯಗಳ ಕ್ರಿಯಾಪದದ ಮುಂದೆ ಈ ಅರ್ಧವಿರಾಮ ಚಿಹ್ನೆ ಬರುತ್ತದೆ ಕೊನೆಗೆ ಕ್ರಿಯಾಪದದ ಮುಂದೆ ಪೂರ್ಣವಿರಾಮ ಬರುತ್ತದೆ.
ಉದಾಹರಣೆ – ಅಂದು ಮಳೆಯಾಯಿತು, ಆಟ ನಡೆಯಲಿಲ್ಲ;ಇದು ಆಟಗಾರರಿಗೆ ನಿರಾಸೆಯನ್ನು ಉಂಟು ಮಾಡಿತು. ಮೊದಲಿನ ಎರಡು ಸ್ವತಂತ್ರ ವಾಕ್ಯಗಳ ಮುಂದೆ ಮಾತ್ರ ಈ (;) ಅರ್ಧವಿರಾಮ ಚಿಹ್ನೆ ಬಂದಿದೆ.
ಅಲ್ಪ ವಿರಾಮ ಚಿಹ್ನೆ (,)
ಅಲ್ಪ ವಿರಾಮ ಚಿಹ್ನೆಯನ್ನು Comma ಎಂದು ಕರೆಯುತ್ತಾರೆ. ಇದು ಸಂಭೋದನೆ ಶಬ್ದದ ಮುಂದೆ ಮತ್ತು ಒಂದಕ್ಕಿಂತ ಹೆಚ್ಚಿರುವ ನಾಮಪದ ವಿಶೇಷಣ , ಸರ್ವನಾಮ, ಕರ್ತೃ, ಕರ್ಮಪದ ,ಕೃದಂತ,ತದ್ಧಿತ, ಪದಗಳ ಮುಂದೆ (ಕೊನೆಯ ಕ್ರಿಯಾಪದವನ್ನು) ಈ ಅಲ್ಪ ವಿರಾಮ ಚಿಹ್ನೆ (,) ಬರುತ್ತದೆ.
ಉದಾಹರಣೆ- ಒಕ್ಕಲಿಗ,ಕುಂಬಾರ ,ಬಳೆಗಾರ , ಬಡಿಗ ಮೊದಲಾದವರು ಹಾವುಗಾರನ ಆಟ ನೋಡುತ್ತಿದ್ದರು.
ಪ್ರಶ್ನಾರ್ಥಕ ಚಿಹ್ನೆ (?)
ಪ್ರಶ್ನಾರ್ಥಕ ಚಿಹ್ನೆಯನ್ನು Question Mark ಎಂದು ಕರೆಯುತ್ತಾರೆ. ವಾಕ್ಯದಲ್ಲಿಯ ಪ್ರಶ್ನಾರ್ಥಕ ಪದದ ಮುಂದೆ ಇಲ್ಲವೇ ಆ ವಾಕ್ಯದ ಕೊನೆಗೆ ಇರುವ ಕ್ರಿಯಾಪದದ ಮುಂದೆ (?) ಈ ಪ್ರಶ್ನಾರ್ಥಕ ಚಿಹ್ನೆ ಕೊಡಬೇಕು. “ಏನು, ಯಾರು, ಎಲ್ಲಿ, ಏಕೆ, ಹೇಗೆ,ಎಷ್ಟು, ಯಾವದು, ಯಾವಳು ….” ಇತ್ಯಾದಿ ಶಬ್ದಗಳೇ ಪ್ರಶ್ನಾರ್ಥಕ ಪದಗಳು .
ಉದಾಹರಣೆ – ೧) ಹಾರಾಡುವ ತಟ್ಟೆಗಳೆಂದರೇನು? ೨)ಇದನ್ನು ಬರೆದವರು ಯಾರು ?
ಭಾವಸೂಚಕ ಚಿಹ್ನೆ (!)
ಭಾವಸೂಚಕ ಚಿಹ್ನೆಯನ್ನು Exclamation Mark ಎಂದು ಕರೆಯುತ್ತಾರೆ. ಹರ್ಷ, ಆಶ್ಚರ್ಯ , ಸಂತೋಷ,ವಿಷಾದ ,ದುಃಖ , ಕೋಪ ಮುಂತಾದ ಭಾವನೆಗಳನ್ನು ಸೂಚಿಸುವ ಶಬ್ದಗಳ ಮುಂದೆ (!) ಈ ಚಿಹ್ನೆ ಬರುತ್ತದೆ . ಇದನ್ನು ಉದ್ಗಾರ ವಾಚಕ, ಆಶ್ಚರ್ಯ ಸೂಚಕ, ವಿಸ್ಮಯ ಬೋಧಕ ಚಿಹ್ನೆ ಎಂದು ಹೇಳುವರು.
ಉದಾಹರಣೆ- ಆಹಾ !ಬೆಳದಿಂಗಳು ಎಷ್ಟು ಸೊಗಸಾಗಿದೆ .
ಉದ್ಧರಣ ಅಥವಾ ವಾಕ್ಯವೇಷ್ಟನ ಚಿಹ್ನೆ(“-“) (‘-‘)
ಉದ್ಧರಣ ಚಿಹ್ನೆಯನ್ನು Quotation Mark, Inverted Commas ಎಂದು ಕರೆಯುತ್ತಾರೆ.ಇವನ್ನು ‘ ಜೋಡು ಅವತರಣಿಕೆ ಚಿಹ್ನೆ ‘, ‘ ಒಂಟಿ ಅವತರಣಿಕೆ ಚಿಹ್ನೆ ‘ ಎಂದು ಹೇಳುವರು. ಒಬ್ಬರು ಆಡಿದ ಅಥವಾ ಆಡಿದ್ದ ಮಾತನ್ನು ಉದ್ಧರಿಸಿ ಬರೆದ ವಾಕ್ಯದ ಆರಂಭಕ್ಕೆ ಮೇಲ್ಗಡೆಗೆ (“) ಹೀಗೆ ಇನ್ನೊಂದು ಕೊನೆಗೆ (“) ಹೀಗೆ ಜೋಡು ಅವತರಣಿಕೆ ಚಿಹ್ನೆ ಕೊಡಬೇಕು. ಆದೆ ರೀತಿಯಾಗಿ ಉದ್ಧರಿಸಿ ಬರೆದ , ‘ಸ್ವಗತ ‘ ಅಥವಾ ವಿಶೇಷಾರ್ಥ ಶಬ್ದದ ಆರಂಭಕ್ಕೆ ಮತ್ತು ಕೊನೆಗೆ ಮೇಲ್ಗಡೆಗೆ (‘-‘) ಹೀಗೆ ಒಂಟಿ ಅವತರಣಿಕೆ ಚಿಹ್ನೆ ಕೊಡಬೇಕು .
ಉದಾಹರಣೆ- ಹರಿಹರ ಕವಿಯುಅನೇಕ ‘ರಗಳೆ’ಗಳನ್ನೂ ,’ಶತಕ’ಗಳನ್ನೂ ,’ಗಿರಿಜಾ ಕಲ್ಯಾಣ’ ವೆಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ.
ಆವರಣ ಚಿಹ್ನೆ ()
ಆವರಣ ಚಿಹ್ನೆಯನ್ನು Bracket Mark ಎಂದು ಕರೆಯುತ್ತಾರೆ. ಇದನ್ನು ‘ವೃತ್ತಾವರಣ ಚಿಹ್ನೆ’ ಅಥವಾ ‘ಕಂಸಚಿಹ್ನೆ ‘ ಎಂದು ಹೇಳುವರು. ಒಂದು ಶಬ್ದವನ್ನಾಗಲಿ ಅಥವಾ ಒಂದು ವಾಕ್ಯವನ್ನಾಗಲಿ ಹೇಳಿ, ಅದಕ್ಕೆ ಸಮಾನಾರ್ಥ ಕೊಡುವ ಶಬ್ದ ಅಥವಾ ವಾಕ್ಯವನ್ನು ಹೇಳುವಾಗ () ಆವರಣ ಚಿಹ್ನೆ ಕೊಡಬೇಕು .
ಉದಾಹರಣೆ- ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್ )ಮತ್ತು ಜಲಜನಕ (ಹೈಡ್ರೋಜನ್ ) ಅನಿಲಗಳು ಉತ್ಪತ್ತಿಯಾಗುತ್ತವೆ.
ವಿವರಣಾತ್ಮಕ ಚಿಹ್ನೆ (:), (-), (:-)
ಇವು ವಿವರಣಾತ್ಮಕ ಚಿಹ್ನೆಗಳು . ಯಾವದೊಂದು ಮಾತಿನ ಅರ್ಥವನ್ನು ಅಥವಾ ಅಭಿಪ್ರಾಯವನ್ನು ವಿವರಿಸುವದಿದ್ದಾಗ ,ಆ ಮಾತಿನಲ್ಲಿ ಶಬ್ದ ಅಥವಾ ವಾಕ್ಯದ ಮುಂದೆ ಮೇಲ್ಕಾಣಿಸಿದ ವಿವರಣೆಯ ಚಿಹ್ನೆಗಳಲ್ಲಿ ಒಂದನ್ನು ಉಪಯೋಗಿಸುವುದುಂಟು . (:) ಇದು (colon), (-) ಇದು (Dash), (:-) ಇದು (Colon-Dash).
ಉದಾಹರಣೆ – ದೈವಕ್ಕಿಂತ ಪ್ರಯತ್ನ ದೊಡ್ಡದು : ದೈವದ ಸಹಾಯದಿಂದ ಪ್ರಯತ್ನವೇ ಆ ಕಾರ್ಯ ನೆರವೇರಿಸುವುದು.
ಪೂರಕಾರ್ಥಕ ಚಿಹ್ನೆ (-)
(-) ಇದು ಪೂರಕಾರ್ಥಕ ಅಥವಾ ನಿಷೇಧಾರ್ಥಕ ಚಿಹ್ನೆ . ಒಂದು ವಿಚಾರವನ್ನು ಹೇಳುತ್ತಿರುವಾಗ ಅಲ್ಲಿಗೆ ಅದನ್ನು ತಡೆದು ,ಆ ವಿಚಾರಕ್ಕೆ ಪೂರಕವಾಗಿ ಮತ್ತೊಂದು ವಿಚಾರವನ್ನು ನಡುವೆ ಹೇಳಿ , ಮತ್ತೆ ಪುನಃ ಮೊದಲ ವಿಚಾರವನ್ನು ಮುಂದುವರೆಸಿ ಪೂರ್ಣಗೊಳಿಸುವುದುಂಟು . ಹೀಗೆ ಪೂರಕವಾಗಿ ನಡುವೆ ಹೇಳಿದ ವಾಕ್ಯದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಈ (-) ಪೂರಕಾರ್ಥದ ಅಥವಾ ನಿರ್ದೇಶಕ ಚಿಹ್ನೆ ಕೊಡಬೇಕು.
ಉದಾಹರಣೆ – ಕರ್ನಾಟಕ ಶಿಲ್ಪಕಲೆಯನ್ನು ಕುರಿತು ನಾವು – ಪರದೇಶದವರು ಕೂಡ ಮುಕ್ತಕಂಠವಾಗಿ ಹೊಗಳುತ್ತಿರುವಾಗ -ಹೆಮ್ಮೆ ಪಡುವದು ಅನುಚಿತವಾಗಲಾರದು.
ಮಿಲನ ಚಿಹ್ನೆ ಅಥವಾ ಅಧಿಕ ಚಿಹ್ನೆ (+)
ಇದು ಅಧಿಕ ಅಥವಾ ಮಿಲನ ಚಿಹ್ನೆ. ಎರಡು ಪದಗಳನ್ನು ಅಥವಾ ಪ್ರಕೃತಿ ಪ್ರತ್ಯಯಗಳನ್ನು ಕೂಡಿಸಿ ಸಂಧಿ, ಸಮಾಸ ಮಾಡುವಾಗ ಇಲ್ಲವೇ ಎರಡು ಸಂಖ್ಯೆಗಳನ್ನು ಕೂಡಿಸುವಾಗ ಈ ಅಧಿಕ ಅಥವಾ ಮಿಲನ ಚಿಹ್ನೆ ಬಳಸುವುದುಂಟು.
ಉದಾಹರಣೆ -ಮನೆ +ಅಲ್ಲಿ =ಮನೆಯಲ್ಲಿ (ಸಂಧಿ )
ಸಮಾನಾರ್ಥಕ ಚಿಹ್ನೆ (=)
(=) ಇದು ಸಮಾನಾರ್ಥಕ ಚಿಹ್ನೆ. ಎರಡು ಪದಗಳಲ್ಲಿಯ ಸಮಾನ ಅರ್ಥವನ್ನು ತಿಳಿಸುವ ಈ ಚಿಹ್ನೆಯು ಸಾಮಾನ್ಯವಾಗಿ ಕಠಿಣ ಶಬ್ದಗಳ ಅರ್ಥವನ್ನು ಬರೆಯುವಾಗ , ಸಂಧಿ ಸಮಾಸ ಮಾಡುವಾಗ, ಅಂಕಿ ಸಂಖ್ಯೆಗಳನ್ನು ಕುಡಿಸು-ಕಳೆ ಮೊದಲಾದ ಗಣಿತದ ಕೃತಿಗಳನ್ನು ಬರೆಯುವಾಗ ಬಳಸುವುದುಂಟು.
ಉದಾಹರಣೆ -ಮಾಡು +ಆಗ = ಮಾಡುವಾಗ
ವಿರೋಧಾರ್ಥಕ ಚಿಹ್ನೆ (x)
ಇದು ವಿರೋಧಾರ್ಥಕ ಚಿಹ್ನೆ. ಪರಸ್ಪರ ಎರಡು ಪದಗಳಲ್ಲಿ ವಿರೋಧ ಅರ್ಥವನ್ನು ತಿಳಿಸುವಂತೆ ಬರೆಯುವಾಗ ಅಥವಾ ಎರಡು ಸಂಖ್ಯೆಗಳನ್ನು ಗುಣಿಸುವಾಗ ಈ ಚಿಹ್ನೆಯನ್ನು ನಡುವೆ ಬಳಸುವುದುಂಟು
ಉದಾಹರಣೆ-ಹಗಲು x ರಾತ್ರಿ
ವಿಭಾಜಕ ಚಿಹ್ನೆ (/)
ಎರಡು ಪದಗಳ ಅಥವಾ ಎರಡು ವಿಭಜನೆ ಮಾಡುವಾಗ ಈ ವಿಭಾಜಕ ಚಿಹ್ನೆ ಬಳಸುವುದುಂಟು.
ಉದಾಹರಣೆ – ೩೦/೫=೬
ಹಂಸಪಾದ ಚಿಹ್ನೆ
ಬರೆಯುತ್ತಿರುವಾಗ ನಡುವೆ ಏನಾದರೊಂದು ಮಾತು ಅಥವಾ ವಿಚಾರ ಬಿಟ್ಟು ಹೋದಾಗ ,ಅಲ್ಲಿ ಆ ಮಾತನ್ನು ಅಥವಾ ವಿಚಾರವನ್ನು ಸೇರಿಸಬೇಕೆಂದೆನಿಸಿದಾಗ ಆ ಸ್ಥಳದಲ್ಲಿ ಅಂದರೆ (ಬಿಟ್ಟು ಹೋದ )ಎರಡು ಶಬ್ದಗಳ ನಡುವೆ ಮತ್ತು ಕೆಳಗಡೆಗೆ ಬರುವಂತೆ, ಈ ಹಂಸಪಾದ ಚಿಹ್ನೆಯನ್ನು ಬರೆಯಬೇಕು.
ಅಡಿಟಿಪ್ಪಣಿ ಚಿಹ್ನೆ (*)
ಬರೆಯುವಾಗ ಯಾವುದಾದರೊಂದು ಪದ ಶಬ್ದ ಅಥವಾ ಪ್ರಸಂಗದ ಬಗೆಗೆ ವಿಶೇಷ ವಿಚಾರ ಹೇಳುವದಿದ್ದಾಗ ಆ ಶಬ್ದದ ಮುಂದೆ ಸ್ವಲ್ಪ ಮೇಲ್ಗಡೆಗೆ ಈ ಅಡಿಟಿಪ್ಪಣಿಯ ಚಿಹ್ನೆ ಕೊಡುವದುಂಟು ; ಮತ್ತು ಈ ವಿಶೇಷ ವಿಚಾರವನ್ನು ಆ ಚಿಹ್ನೆ ಕೊಟ್ಟ ಅದೇ ಪುಟದ ಕೊನೆಯ ಸಾಲಿನ ಕೆಳಗೆ ಗೆರೆ ಹಾಕಿ ಸಣ್ಣ ಅಕ್ಷರದಲ್ಲಿ ಬರೆಯಬೇಕು.
ಉದಾಹರಣೆ-“ಷಾಹ ಅಬಾಸ್ * ಬಾದಷಹನು ನ್ಯಾಯ ತೀರಿಸುವದೆಂದರೆ ಯಾವಾಗಲು ಜನ ಬಹಳ ನೆರೆಯುವರು …………….
ಮೇಲಿನ ಎಲ್ಲ ಲೇಖನ ಚಿಹ್ನೆ ನಾವು ಸಾಮಾನ್ಯವಾಗಿ ವಾಕ್ಯಗಳಲ್ಲಿ ಬಳಸುವ ಚಿಹ್ನೆಗಳಾಗಿವೆ. ಇದರ ಜೊತೆಗೆ ಹಲವಾರು ಲೇಖನ ಚಿಹ್ನೆಗಳು ಇನ್ನು ಇದ್ದು ಅವುಗಳನ್ನು ಸಹ ನಾವು ಬಳಸುತ್ತೇವೆ.