ನಾಮಪದ ಎಂದರೇನು ಅದರ ವಿಧಗಳು । Noun meaning in kannada

ನಾಮಪದ ಎಂದರೇನು ಅದರ ವಿಧಗಳು : ನಾಮಪದಗಳು (Noun) ಮನುಷ್ಯ ಪ್ರಾಣಿ ವಸ್ತು ಮೊದಲಾದವುಗಳ ಹೆಸರು ಹೇಳುವ ಶಬ್ದಗಳಾಗಿವೆ.

ನಾಮಪದ ಎಂದರೇನು ಅದರ ವಿಧಗಳು

Noun meaning in kannada – ನಾಮಪದಗಳು ಎಂದರೆ ನಾಮಪ್ರಕೃತಿ ಅಥವಾ ಪ್ರಾತಿಪದಿಕದ ಮುಂದೆ ನಾಮವಿಭಕ್ತಿ ಪ್ರತ್ಯಯಗಳು ಸೇರಿದಾಗ ನಾಮಪದಗಳಾಗುತ್ತವೆ. ನಾಮಪದಗಳನ್ನುಂಟು ಮಾಡುವ ಮೂಲ ರೂಪವೇ ನಾಮಪ್ರಕೃತಿ ಅಥವಾ ಪ್ರಾತಿಪದಿಕ ಎನಿಸುವುದು.

ಉದಾಹರಣೆ – ‘ಮನೆಯನ್ನು’ ಈ ಪದಗಳಲ್ಲಿ ‘ಮನೆ’ ಎಂಬುದು ಮೂಲ ರೂಪ ಇದನ್ನು ನಾಮಪದದ ಮೂಲರೂಪ ಅಥವಾ ನಾಮ ಪ್ರಕೃತಿ ಎನ್ನುತ್ತೇವೆ

ನಾವು ಮಾತಾನಾಡುವಾಗ ಅನೇಕ ಬಗೆಯ ಶಬ್ದಗಳು ಇರುತ್ತವೆ, ಆ ಶಬ್ದಗಳಿಗೆ ನಾವು ಬೇರೆ ಬೇರೆ ಬಗೆಯ ಹೆಸರು ಕೊಟ್ಟಿರುತ್ತೇವೆ ಅಂದರೆ ಒಂದೊಂದು ಜಾತಿಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ.

ನಾಮಪದ ವಿಧಗಳು

ನಾಮಪದದಲ್ಲಿ 4 ವಿಧಗಳು / ಪ್ರಕಾರಗಳು

1) ವಸ್ತುವಾಚಕ
2)ವಿಶೇಷಣ
3)ಸರ್ವನಾಮ
4) ಭಾವನಾಮ

1) ವಸ್ತುವಾಚಕ

ವಸ್ತುಗಳ ಹೆಸರುಗಳನ್ನೂ ಹೇಳುವ ಶಬ್ದಗಳೆಲ್ಲ ‘ವಸ್ತುವಾಚಕ ನಾಮಪದ’ಗಳು.

ಚೇತನವುಳ್ಳ ವಸ್ತುಗಳು-ಮನುಷ್ಯನ ಹೆಸರಿನ ಶಬ್ದ, ಪ್ರಾಣಿಗಳ ಹೆಸರು ಮುಂತಾದ ಹೆಸರಿನ ಶಬ್ದಗಳು. (ಉದಾಹರಣೆ – ರಾಮ,ಕೃಷ್ಣಾ,ಬಸವ,ಗಂಗೆ,ಶಾರದೆ,ಕಾವೇರಿ, ಆಕಳು, ಎಮ್ಮೆ, ಎತ್ತು, ಕುರಿ , ಕೋಳಿ,ಬೆಕ್ಕು ,ನಾಯಿ ಹುಲಿ,ಜಿಂಕೆ,ಹಾವು,ಚೇಳು,ಹಳ್ಳಿ,ಇರುವೆ,ಜೇನು,ಪಾತರಗಿತ್ತಿ,ಗೆದ್ದಲು ಮೊದಲಾದ ಹೆಸರಿನ ಶಬ್ದಗಳು.)

ಚೇತನವಲ್ಲದ ವಸ್ತುಗಳು – ನಿರ್ಜಿವ ವಸ್ತುಗಳ ಅಥವಾ ಚಾಲನೆ ಇಲ್ಲದ ವಸ್ತುಗಳ ಹೆಸರುಗಳು. (ಉದಾಹರಣೆ -ಕಲ್ಲು, ಕಟ್ಟಿಗೆ,ಮಣ್ಣು,ಗಿಡ,ಬಳ್ಳಿ,ಹೂ,ಹಣ್ಣು,ಕಾಯಿ,ನೆಲ,ಜಲ,ಗುಡ್ಡ,ಬೆಟ್ಟ, ಅಡವಿ, ಮನೆ ,ಶಾಲೆ ,ವಾಹನ, ಉಪಕರಣಗಳು,ಅಂಗಡಿ,ಪುಸ್ತಕ,ಪೆಟ್ಟಿಗೆ,ಮೊದಲಾದ ಹೆಸರಿನ ಶಬ್ದಗಳು )

ವಸ್ತುವಾಚಕದಲ್ಲಿ 3 ಪ್ರಕಾರಗಳು

a) ರೂಢನಾಮ
b)ಅಂಕಿತನಾಮ
c)ಅನ್ವರ್ಥಕನಾಮ

a) ರೂಢನಾಮ

ಬಹುಕಾಲದಿಂದ ಬಂಡ ಒಂದೇ ಜಾತಿಯ (ವರ್ಗದ ಅಥವಾ ಸಮುದಾಯದ ) ವಸ್ತುಗಳ ಮತ್ತು ಪ್ರಾಣಿಗಳ ಹೆಸರುಗಳಿಗೆ ‘ರೂಢನಾಮ’ಗಳೆನ್ನುವರು.ಈ ರೂಢನಾಮಗಳೆಲ್ಲ ಜಾತಿವಾಚಕಗಳೆನಿಸುವವು. ‘ಜಾತಿ’ಎಂದರೆ ಒಂದೇ ವರ್ಗಕ್ಕೆ ಸೇರಿದ ಅಥವಾ ಒಂದೇ ತರಗತಿ ಅಥವಾ ಒಂದೇ ಸಮುದಾಯವನ್ನು ಸೂಚಿಸುವ ಹೆಸರಿನ ಶಬ್ದಗಳು.

ಉದಾ- ಮನೆ,ಶಾಲೆ,ಮನುಷ್ಯ,ನದಿ,ಪರ್ವತ ,ಜಾತ್ರೆ,ದೇವಾಲಯ,ಪಶು,ಪಕ್ಷಿ,ಗಿಡ,ಹಣ್ಣು,ಹಾವು,ಪುಸ್ತಕ,ಹಸು ,ಎಮ್ಮೆ,ಎತ್ತು,ಗಾಡಿ,ಗ್ರಹಗಳು,ನಕ್ಷತ್ರಗಳು,ಹೊಲ,ತೋಟ ಮುಂತಾದವುಗಳು.

b) ಅಂಕಿತನಾಮ

ಒಂದೇ ಜಾತಿಯ (ವರ್ಗದ)ಹಲವು ವಸ್ತುಗಳಲ್ಲಿ,ಪ್ರಾಣಿಗಳಲ್ಲಿ,ವ್ಯಕ್ತಿಗಳಲ್ಲಿ ಒಂದನ್ನೇ ಬೇರೆ ಮಾಡಿ ತೋರಿಸಲು ಇತ್ತ ಹೆಸರುಗಳಿಗೆ ಅಂಕಿತ ನಾಮಗಳೆನ್ನುವರು.ಇದನ್ನೇ ವ್ಯವಹಾರದ ಅನುಕೂಲತೆಗಾಗಿ ಇಟ್ಟ ಹೆಸರುಗಳಿಗೆ ‘ಅಂಕಿತನಾಮ’ ಗಳೆಂದು ಇನ್ನೊಂದು ರೀತಿಯಲ್ಲಿ ಹೇಳುವರು.

ಉದಾ- ರಾಮ,ಕೃಷ್ಣಾ,ಬಸವ,ಹನುಮ,ರಾಜಶೇಖರ, ಆನಂದ,ಕನ್ನಡ ಶಾಲೆ, ಗಂಗಾ ನದಿ,ಧಾರವಾಡ, ಹುಬ್ಬಳ್ಳಿ ಹಿಮಾಲಯ,ಕಾಳಿದಾಸ,ಶಬ್ದಮಣಿ ದರ್ಪಣ,ಐರಾವತ, ಕಾಮದೇನು,ಇಂದಿರಾ,ರಾಜೀವ,ಭಾರತ, ಹರಿಶ್ಚಂದ್ರ , ಅನುಸೂಯ,ದ್ರೌಪದಿ, ಸೀತಾ,ಸೂರ್ಯ,ಚಂದ್ರ,ಜಾನ್,ಜಾರ್ಜ,ಮೇರಿ,ಪೈಗಂಬರ್,ಪಾತಿಮಾ, ಅಕಬರ, ಬಾಹುಬಲಿ,ಯಶೋಧರಾ, ಮುಂತಾದವುಗಳು.

c)ಅನ್ವರ್ಥಕನಾಮ

ಅರ್ಥಕ್ಕೆ ಅನುಗುಣವಾಗಿ ಉದ್ಯೋಗ,ಗುಣ,ಮೊದಲಾದವುಗಳಿಂದ ವಸ್ತುವಿಗೆ ಇಲ್ಲವೇ ವಸ್ತುಗಳಿಗೆ ಬಂದ ಹೆಸರುಗಳು ಅನ್ವರ್ಥಕನಾಮ ಎನಿಸುವವು.

ಉದಾ-ವೈದ್ಯ,ಶಿಕ್ಷಕ,ಕುಂಟ,ಕಿವುಡ,ಮುದುಕ,ಗಾಣಿಗ,ಭಿಕ್ಷುಕ,ಹಾವುಗಾರ,ಜ್ಯೋತಿಷಿ,ವ್ಯಾಪಾರೀ , ಪಂಡಿತ , ಕವಿ ,ಗಾಯಕ,ರೋಗಿ, ಯೋಗಿ, ವೈಮಾನಿಕ,ಚಾಲಕ,ಮಂತ್ರಿ,ಪ್ರಧಾನಿ,ರಾಷ್ಟ್ರಪತಿ, ಮುಂತಾದವು .

2)ವಿಶೇಷಣಗಳು

ವಸ್ತುಗಳ, ಪ್ರಾಣಿಗಳ ಅಥವಾ ವ್ಯಕ್ತಿಗಳ ಗುಣ, ಸ್ವಭಾವ,ರೀತಿಗಳನ್ನು ವರ್ಣಿಸಲು ಅಥವಾ ವಿಶೇಷಿಸುವ (ತಿಳಿಸುವ ) ಶಬ್ದಗಳನ್ನು ‘ವಿಶೇಷಣ’ಗಳೆನ್ನುವರು . ಈ ಶಬ್ದಗಳಲ್ಲಿ ‘ವಿಶೇಷಣ’ಮತ್ತು ‘ವಿಶೇಷ್ಯ’ಎಂಬ ಎರಡು ಪದಗಳು ಮುಖ್ಯವಾಗಿ ಬರುತ್ತವೆ.’ವಿಶೇಷಣವು ವಸ್ತು,ಪ್ರಾಣಿ,ವ್ಯಕ್ತಿಗಳ ಗುಣ ಸ್ವಭಾವ ರೀತಿಗಳನ್ನು ವರ್ಣಿಸುತ್ತಿದ್ದರೆ ‘ವಿಶೇಷ್ಯವು ‘ ವರ್ಣಿಸಿಕೊಳ್ಳುತ್ತದೆ.

ಉದಾ- ಬಿಳಿಯ (ವಿಶೇಷಣ) ಬಟ್ಟೆ (ವಿಶೇಷ್ಯ )

ವಿಶೇಷಣಗಳಲ್ಲಿ 5 ಪ್ರಕಾರಗಳು

a) ಗುಣವಾಚಕ
b)ಸಂಖ್ಯಾವಾಚಕ
c)ಪರಿಮಾಣವಾಚಕ
d) ಪ್ರಕಾರವಾಚಕ
e)ದಿಗ್ವಾಚಕ

a)ಗುಣವಾಚಕ

ವಸ್ತು,ಪ್ರಾಣಿ,ವ್ಯಕ್ತಿಗಳ ಗುಣ,ಸ್ವಭಾವ ರೀತಿಗಳನ್ನು ವರ್ಣಿಸುವ ಅಥವಾ ವಿಶೇಷಿಸುವ ಶಬ್ದಗಳನ್ನು ‘ಗುಣವಾಚಕ ವಿಶೇಷಣ ಎಂದು ಕರೆಯುವರು. ಇವು ವಸ್ತು ಅಥವಾ ಪ್ರಾಣಿಗಳ ಒಂದಿಲ್ಲೊಂದು ಗುಣ ಸ್ವಭಾವ ರೀತಿಗಳನ್ನು ತಿಳಿಸುತ್ತದೆ.

ಉದಾ- ದೊಡ್ಡ,ಚಿಕ್ಕ,ಹಿರಿಯ,ಕಿರಿಯ,ಒಳ್ಳೆಯ,ಕೆಟ್ಟ,ಬಿಳಿದು,ಕರಿದು,ಹಳೆಯದು,ಹೊಸದು,ಕೆಂಪು,ಓಡುವ , ಭವ್ಯ ಮಲಗಿದ,ಸುಂದರ,ವಿಶಾಲ, ಪವಿತ್ರ.ಶ್ರೇಷ್ಠ,ಕನಿಷ್ಠ ಮುಂತಾದವುಗಳು.

b)ಸಂಖ್ಯಾವಾಚಕ

ಸಂಖ್ಯೆಗಳನ್ನು ಸೂಚಿಸುವ (ತಿಳಿಸುವ) ಶಬ್ದಗಳನ್ನು ಸಂಖ್ಯಾವಾಚಕ ಎಂದು ಕರೆಯುವರು. ಈ ಸಂಖ್ಯಾವಾಚಕ ಶಬ್ದಗಳು ವಿಶೇಷಣಗಳಂತೆ ವರ್ತಿಸುತ್ತವೆ.

ಉದಾ-ಓದು ಊರು,ಎರಡು ದಿನ,ಹನ್ನೆರಡು ತಿಂಗಳು,ಎಂಟನೆಯ ತರಗತಿ ,ಇಬ್ಬರು ಗೆಳೆಯರು, ಡಜನ್ ಹಣ್ಣು ,ಸಾವಿರ ಮನೆಗಳು , ನೂರು ವರ್ಷ, ಲಕ್ಷ ದೀಪಗಳು, ಅಷ್ಟದಿಕ್ಪಾಲಕರು ,ನವ ಗ್ರಹಗಳು, ಚತುರಾಶ್ರಮ,ಸಪ್ತರ್ಷಿಗಳು,ಬೇರೊಂದು,ಯಾವುದೊಂದು ಮುಂತಾದವುಗಳು.

c)ಪರಿಮಾಣವಾಚಕ

ವಸ್ತುಗಳ,ಪ್ರಾಣಿಗಳ ತೂಕ ಅಳತೆ ಗಾತ್ರ ಪರಿಮಾಣಗಳನ್ನು ವರ್ಣಿಸುವ ಶಬ್ದಗಳು ಪರಿಮಾಣವಾಚಕಗಳಾಗಿವೆ ,ಈ ಪರಿಮಾಣವಾಚಕ ಪದಗಳು ವಿಶೇಷಣಗಳಂತೆ ವರ್ಣಿಸುತ್ತವೆ .

ಉದಾ- ಅಷ್ಟು,ಇಷ್ಟು,ಎಷ್ಟು,ಹಲವು ,ಕೆಲವು, ಇನಿತು,ಅಲ್ಪ,ಬಹಳ,ಸಣ್ಣದು,ದೊಡ್ಡದು,ಮಹತ್ತು,ಗುರು, ಲಘು ,ದೂರ,ಸಮೀಪ ಮುಂತಾದವುಗಳು.

d)ಪ್ರಕಾರವಾಚಕ

ವಸ್ತುಗಳ ನಿಜಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳು ಪ್ರಕ್ರಾರವಾಚಕಗಳು.ಈ ಪ್ರಕಾರ ವಾಚಕಗಳು ಸಹ ವಿಶೇಷಣಗಳಂತೆ ವರ್ತಿಸುತ್ತವೆ.

ಉದಾ-ಎನ್ ಅಂಥ ,ಇಂಥ, ಅಂತಹ, ಇಂತಹ,ಎಂತಹ , ಅಂಥವನು,ಇಂಥವನು,ಅಂತಹನು,ಇಂತಹನು , ಎಂಥವನು ,ಎಂತಹನು ಮುಂತಾದವುಗಳು.

e)ದಿಗ್ವಾಚಕಗಳು

ದಿಕ್ಕುಗಳ ಹೆಸರುಗಳನ್ನೂ ಸೂಚಿಸುವ ಶಬ್ದಗಳನ್ನು ದಿಗ್ವಾಚಕಗಳೆಂದು ಕರೆಯುವರು.ಅಥವಾ ಸ್ಥಳವನ್ನು ಸೂಚಿಸುವದರಿಂದ ಈ ಶಬ್ದಗಳನ್ನು ಸ್ಥಳವಾಚಕ ಎಂದು ಕರೆಯುವರು.

ಉದಾ- ಪೂರ್ವ,ಪಶ್ಚಿಮ, ಉತ್ತರ,ದಕ್ಷಿಣ,ಮೂಡಣ,ಪಡುವಣ,ಬಡಗಣ,ತೆಂಕಣ, ನೈಋತ್ಯ, ಈಶಾನ್ಯ,ಆಗ್ನೇಯ,ವಾಯುವ್ಯ, ಆಚೆ,ಈಚೆ,ಮೇಲೆ,ಕೆಳಗೆ,ಎಡ ,ಬಲ ಮುಂತಾದವುಗಳು.

3) ಸರ್ವನಾಮಗಳು

ಎಲ್ಲ ನಾಮಪದಗಳ ಸ್ಥಳಗಳಲ್ಲಿದ್ದು ,ಅದೇ ಅರ್ಥವನ್ನು ಸೂಚಿಸುವ ಅಥವಾ ಅದೇ ಅರ್ಥದಲ್ಲಿ ಉಪಯೋಗಿಸುವ ಶಬ್ದಗಳಿಗೆ ಸರ್ವನಾಮಗಳು ಎನ್ನುವರು, ಇವು ವಸ್ತುವಾಚಕಗಳೇ ಆಗಿರುತ್ತವೆ.

ಉದಾ- ಅವನು,ಅವಳು,ಅದು,ನಾನು,ನೀನು,ನಾವು,ನೀವು,ಯಾರು,ಏನು,ತಾನು,ತಾವು,ಎಲ್ಲಿ,ಏಕೆ, ಯಾವನು ,ಯಾವಳು, ಮುಂತಾದವುಗಳು.

ಪ್ರಕಾರಗಳು

a)ಪುರುಷಾರ್ಥಕ ಸರ್ವನಾಮ
b)ಆತ್ಮಾರ್ಥಕ ಸರ್ವನಾಮ
c)ಪ್ರಶ್ನಾರ್ಥಕ ಸರ್ವನಾಮ
d)ದರ್ಶಕ ಸರ್ವನಾಮ

a)ಪುರುಷಾರ್ಥಕ ಸರ್ವನಾಮಗಳು-

ಅ ) ಉತ್ತಮ ಪುರುಷಕ್ಕೆ : ನಾನು,ನಾವು
ಬ ) ಮಧ್ಯಮ ಪುರುಷಕ್ಕೆ : ನೀನು,ನೀವು
ಕ ) ಪ್ರಥಮ ಪುರುಷಕ್ಕೆ : ಅವನು,ಅವಳು, ಅವರು, ಅದು,ಅವು

b)ಆತ್ಮಾರ್ಥಕ ಸರ್ವನಾಮಗಳು – ತಾನು,ತಾವು.

c)ಪ್ರಶ್ನಾರ್ಥಕ ಸರ್ವನಾಮ – ಯಾವನು, ಯ್ದಳು, ಯಾರು, ಯಾವದು,ಯಾವವು,ಏನು,ಅವನು,ಅವ್ಳು,ಆರು, ಆವದು ,ಯಾವವು,ಮುಂತಾದವುಗಳು.

d)ದರ್ಶಕ ಸರ್ವನಾಮ

ಅ ) ಸಮೀಪ ದರ್ಶಕಕ್ಕೆ – ಇವನು,ಇವಳು,ಇವರು,ಇದು,ಇವು,ಈತನು,ಈಕೆ, ಮುಂತಾದವುಗಳು.

ಬ ) ದೂರ ದರ್ಶಕಕ್ಕೆ- ಅವನು,ಅವ್ಳು,ಅವ್ರು,ಅವು,ಆತನು,ಆಕೆ, ಮುಂತಾದವುಗಳು.

4)ಭಾವನಾಮಗಳು

ವ್ಯಕ್ತಿಗಳ,ಪ್ರಾಣಿಗಳ,ವಸ್ತುಗಳ,ಗುಣ-ಸ್ವಭಾವ-ಸ್ಥಿತಿ-ಕ್ರಿಯೆ ಮೊದಲಾದ ಭಾವ-ಭಾವನೆಗಳನ್ನು ಬುದ್ದಿಗೆ,ಮನಸ್ಸಿಗೆ ಸೂಚಿಸುವ ಅಥವಾ ತಿಳಿಸುವ ಶಬ್ದಗಳು ‘ಭಾವನಾಮ’ಗಳು ಎಂದು ಕರೆಯುವರು.

ಉದಾ- ಸಿಟ್ಟು,ಸಂತೋಷ,ಶಾಂತಿ,ಅಶಾಂತಿ,ಕೋಪ,ತಾಪ,ಸಮಾಧಾನ,ಅಳು,ನಗು,ಸುಖ,ದುಃಖ,ಕಪ್ಪು, ಬಿಳುಪು , ಕೆಂಪು,ಹಿರಿಮೆ,ಗರಿಮೆ, ಹೇಳಿಕೆ,ಕೇಳಿಕೆ, ನೋಟ,ಮಾಟ ,ಕೂಟ,ಗೌಡಿಕೆ, ಶೂರತನ, ನುಣುಪು, ಸೌಜನ್ಯ ,ದೌರ್ಜನ್ಯ, ಧೈರ್ಯ, ಶೌರ್ಯ,ಪಾಂಡಿತ್ಯ,ವಿದ್ವತ್ತು, ಮುಂತಾದವುಗಳು.

ಈ ರೀತಿಯಾಗಿ ನಾವು ನಾಮಪದ ಎಂದರೇನು ಅದರ ವಿಧಗಳು ಕಾಣಬಹುದಾಗಿದೆ .

Leave a Comment

error: Content is protected !!