Alankaragalu in kannada – ‘ಭಾಷೇ’ ಮುಂದು ಅದರ ಸ್ವರೂಪ ನಿಯಮಗಳನ್ನು ತಿಳಿಸುವ ‘ವ್ಯಾಕರಣ’ ಹಿಂದು ; ಅದರಂತೆ ‘ಕಾವ್ಯ’ ಮುಂದು ,ಅದರ ಲಕ್ಷಣವನ್ನು ತಿಳಿಸುವ ‘ಅಲಂಕಾರಶಾಸ್ತ್ರ’ ಹಿಂದು .
ಈ ಲೇಖನದಿಂದ ಅಲಂಕಾರ ಎಂದರೇನು ?. ಅಲಂಕಾರದಲ್ಲಿ ಕಂಡು ಬರುವ ವಿಧಗಳ ಬಗ್ಗೆ ತಿಳಿದುಕೊಳ್ಳುವಿರಿ.
ಅಲಂಕಾರಗಳು ಎಂದರೇನು?
ಅಲಂಕಾರಗಳು ಎಂದರೇ -ಚೆಲುವು , ಸೌಂದರ್ಯ ಹೆಚ್ಚಿಸುವ ಮತ್ತು ಮನಾಕರ್ಷಣೆ ಮಾಡುವ ಸಾಧನವೇ ಅಲಂಕಾರ. ‘ಇದ್ದ ಚಲುವಿಕೆ ಎದ್ದು ಕಾಣಬೇಕು ;ಮುದ್ದಾಗಿ ತೋರಬೇಕು’ ಎಂದು ಪಂಡಿತರೊಬ್ಬರು ಹೇಳುತ್ತಾರೆ . ಈ ರೀತಿ ಸೌಂದರ್ಯಾತಿಶಯವನ್ನು ಕಲ್ಪಿಸಲು ಅಲಂಕಾರಗಳನ್ನು ಬಳಸುತ್ತಾರೆ .
ಅಲಂಕಾರದ ವಿಧಗಳು – Alankaragalu in kannada
ಅಲಂಕಾರಗಳನ್ನು ಶಬ್ದದಿಂದ ಮತ್ತು ಅರ್ಥದಿಂದ ಎರಡು ಬಗೆಯಾಗಿ ಗುರುತಿಸುತ್ತಾರೆ. ಮೊದಲನೆಯದು ಶಬ್ದ ಚಮತ್ಕಾರವಾದ ‘ಶಬ್ದಾಲಂಕಾರ ‘. ಎರಡನೆಯದು ಅರ್ಥ-ಸೌಂದರ್ಯ ಮೂಲವಾದ ‘ಅರ್ಥಲಂಕಾರ ‘.
ಅಲಂಕಾರದಲ್ಲಿ ಎರಡು ವಿಧಗಳು
೧) ಶಬ್ದಾಲಂಕಾರ
೨)ಅರ್ಥಾಲಂಕಾರ
ಶಬ್ದಾಲಂಕಾರ
ಶಬ್ದಾಲಂಕಾರವೆಂದರೆ -ಶಬ್ದಗಳ ಜೋಡಣೆಯ ಚಮತ್ಕಾರದಿಂದ ಗದ್ಯ-ಪದ್ಯ-ಕಾವ್ಯಗಳ ಸೊಬಗು ಹೆಚ್ಚಿದರೆ ಅದು ‘ಶಬ್ದಾಲಂಕಾರ’ ವೆನಿಸುವುದು .
ಶಬ್ದಾಲಂಕಾರದಲ್ಲಿ ೩ ವಿಧಗಳು
೧) ಅನುಪ್ರಸಾಲಂಕಾರ
ಅನುಪ್ರಸಾಲಂಕಾರವೆಂದರೆ ಗದ್ಯ,ಪದ್ಯ,ಕಾವ್ಯಗಳಲ್ಲಿ, ಅಕ್ಷರ ಅಥವಾ ಶಬ್ದಗಳು ಪುನಃ ಪುನಃ ಬರುತ್ತಿದ್ದರೆ ಅದು ‘ಅನುಪ್ರಾಸ’ವೆನಿಸುತ್ತದೆ .
ಅನುಪ್ರಸಾದಲ್ಲಿ ೩ ವಿಧಗಳು
- ಆದಿಪ್ರಾಸ – ಪದ್ಯದೊಳಗಿನ ಶಬ್ದದ ಆದಿಯಲ್ಲಿ ಒಂದೇ ಅಕ್ಷರ ಅಥವಾ ಒಂದೇ ಕಾಗುಣಿತಾಕ್ಷರವು (ಬಳ್ಳಿಯ) ಪುನಃ ಪುನಃ ಬರುತ್ತಿರುವದೇ ‘ಆದಿಪ್ರಾಸಾಲಂಕಾರ ‘ ವೆನಿಸುವುದು .
ಅಲಂಕಾರಗಳು ಉದಾಹರಣೆ : ಕಮಲ ದಳ ನಯನ ಕಾಳಿಯ ಮಥನ ಕಿಸಲಯೋ ।
ಪಮ ಚರಣ ಕಿಶಪತಿ ಸೇವ್ಯ ಕುಜಹರ ಕೂರ್ಮ ।
ಸಮ ಸತ್ಕಪೊಲ ಕೇಯೂರಧರ ಕೈರವ ಶ್ಯಾಮ ಕೋಕನದ ಗೃಹಿಯ ।।
ಈ ಪದ್ಯದಲ್ಲಿ ಶಬ್ದಾಲಂಕಾರದ ಚಮತ್ಕಾರವೇನಂದರೆ ಶಬ್ದದ ಆದಿಯಲ್ಲಿಯ ಅಕ್ಷರಗಳು ‘ಕ’ ವ್ಯಂಜನದ ಕಾಗುಣಿತಾಕ್ಷರದ(ಬಳ್ಳಿ)ಗಳಾಗಿರುತ್ತವೆ .( ಕ,ಕಾ,ಕಿ,ಕೀ,………. ಹೀಗೆ )
- ವೃತ್ತ್ಯಾನುಪ್ರಾಸ -ಒಂದಾಗಲಿ,ಎರಡಾಗಲಿ ವ್ಯಂಜನಗಳು ಪುನಃ ಪುನಃ ಹೇಳಲ್ಪಡುತ್ತಿದ್ದರೆ ಅದು ವೃತ್ತ್ಯಾನುಪ್ರಸಾಲಂಕಾರ ಎನಿಸುವುದು.
ಉದಾ : ಮಾಮರದಲ್ಲಿ ಮಲ್ಲಿಕಾ ಲತೆಯಲ್ಲಿ ।
ಎಳ ಅಸುಗೆ ಮರದಲ್ಲಿ ಜಳರುಹಾಕರದಲ್ಲಿ ।।
ಈ ಪದ್ಯದಲ್ಲಿ ಲ್ಲಿ ಎಂಬ ಸಂಯುಕ್ತಾಕ್ಷರ ಪ್ರಯೋಗ ಅನೇಕಾವರ್ತಿಯಾಗಿದೆ .
- ಛೇಕಾನುಪ್ರಾಸ -ಎರಡೆರಡು ವ್ಯಂಜನಗಳಿಗೆ ಕೂಡಿದ ಶಬ್ದ ವು ಪುನಃ ಪುನಃ ಬಂದಿದ್ದಾರೆ ಅದು ‘ಛೇಕಾನುಪ್ರಾಸಲಂಕಾರ’ ವೆನಿಸುವುದು.
ಉದಾ : ೧)ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ -ಬಸವಣ್ಣ
೨) ಹಾಡಿ ಹಾಡಿ ರಾಗ ಬಂತು
ಉಗುಳಿ ಉಗುಳಿ ರೋಗ ಬಂತು
೨)ಯಮಕಾಲಂಕಾರ :-
ಯಮಕಾಲಂಕಾರವೆಂದರೆ ಮೂರೂ ಅಥವಾ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ , ಪದಭಾಗವಾಗಲಿ ಒಂದು ಪದ್ಯದ ಆದಿಯಲ್ಲಿ ಇಲ್ಲವೇ ಮಧ್ಯದಲ್ಲಿ ಇಲ್ಲವೇ ಅಂತ್ಯದಲ್ಲಿ ಹೀಗೆ ನಿಯತ ಸ್ಥಾನದಲ್ಲಿ ಬಂದಿದ್ದಾರೆ ಅದು ‘ಯಮಕಾಲಂಕಾರ’ ವೆನಿಸುವುದು
ಉದಾ : ಪಾವನತುಲಾಭಾರಣಮಂ ಮಾಡಿಕೊಂಡೆಸೆವ ।
ಪಾವನತರ ಸ್ವರೂಪಂ ನಾರದಾದಿ ಮುನಿ ।
ಪಾವನತಾಪಾದ ಪಂಕೇರುಹ ದ್ವಂದನಿಂದು ಕಳವತಂಸನಾಮೆಯ ।।
೩)ಚಿತ್ರಕವಿತ್ವ :-
ಚಿತ್ರಕವಿತ್ವ ಎಂದರೆ ಅಕ್ಷರಗಳನ್ನು ಕವಿಗಳು ಕುಶಲತೆಯಿಂದ ಆರಿಸಿ , ಜೋಡಿಸಿ ಕಾವ್ಯದಲ್ಲಿ ಉಂಟುಮಾಡುವ ಶಬ್ದವೈಚಿತ್ರ್ಯಕ್ಕೆ ‘ ಚಿತ್ರಕವಿತ್ವ ‘ವೆಂದು ಹೆಸರು . ಇದನ್ನು ‘ಬಂಧ ‘ವೆಂದು ಕರೆಯುತ್ತಾರೆ.
ಉದಾ:ನನ್ದನ ನನ್ದನ ನಿನ್ನೊ
ನ್ದನ್ದದ ಮೈಮುನ್ದೆ ನಿನ್ದುದೆನ್ದೆನೆ ಮುದದಿ
ನ್ದನ್ದಿನ್ದುನ್ದೆನ್ನದೆ ನೀ
ನೆನ್ದುಂ ಮನ್ಮನದೆ ನೆಮ್ಮೆ ನಿನ್ದೀಮುದಮಂ ||
ಇದರಲ್ಲಿ ನ ದ ನ ಅಕ್ಷರಗಳನ್ನು ಮಾತ್ರ ಬಳಸಲಾಗಿದೆ .
ಅರ್ಥಾಲಂಕಾರಗಳು
ಅರ್ಥಾಲಂಕಾರವೆಂದರೆ ಅರ್ಥಕ್ಕೆ ಪ್ರಾಮುಖ್ಯತೆವಿತ್ತು , ಅರ್ಥವನ್ನು ಸಂವರ್ದಿಸುವದು ಮತ್ತು ಸ್ಪಷ್ಟಪಡಿಸುವುದಾಗಿದೆ.
ಈ ಕಾರ್ಯವು ಹೋಲಿಕೆ, ವಿರೋಧ,ನಾನಾರ್ಥ ದೃಷ್ಟಾಂತ, ತರ್ಕಬದ್ದತೆ ಮುಂತಾದ ಬಗೆಗಳಿಂದ ಅರ್ಥಲಂಕಾರ ನಡೆಯುತ್ತದೆ .ಅದರಲ್ಲಿಯೂ ಹೋಲಿಕೆಯಿಂದಾಗುವ ಅರ್ಥಲಂಕಾರಗಳು ಹೆಚ್ಚು .
ಅರ್ಥಾಲಂಕಾರದ ವಿಧಗಳು
ಪ್ರಾಚೀನ ಶಾಸ್ತ್ರಜ್ಞರು ಸುಮಾರು ೧೨೦ ಅಲಂಕಾರಗಳು ಇವೆ ಎಂದು ಹೇಳಿದ್ದಾರೆ .ಆದರೆ ಪ್ರಾಥಮಿಕ, ಮಾಧ್ಯಮಿಕ, ಉನ್ನತ ತರಗತಿಯಲ್ಲಿ ಸುಮಾರು ೮-೧೦ ಅರ್ಥಲಂಕಾರಗಳಿವೆ ,ಅವುಗಳಲ್ಲಿ ಕೆಲವೊಂದನ್ನು ನಾವು ಕೆಳಗಿನಂತೆ ತಿಳಿದುಕೊಳ್ಳೋಣ .
೧) ಉಪಮಾಲಂಕಾರ
ಉಪಮಾಲಂಕಾರವೆಂದರೆ ವಸ್ತುಗಳಲ್ಲಿಯ ಪರಸ್ಪರ ಸಾದೃಶ್ಯ ಸಂಪತ್ತನ್ನು ಹೇಳುವುದು ‘ಉಪಮಾಲಂಕಾರ’ ಎನಿಸುವುದು. ಈ ಅಲಂಕಾರದಲ್ಲಿ ಉಪಮಾನ-ಉಪಮೇಯ ಪದಗಳೇ ಆ ಎರಡು ವಸ್ತುಗಳು . ಅವೆರಡರಲ್ಲಿ ಸಾದೃಶ್ಯ ಸಂಪತ್ತು (ಹೋಲಿಕೆ) ಗುರುತಿಸುವದು ಪ್ರಧಾನ ಅಂಶ .
ಉಪಮಾನದ ಸಾದೃಶ್ಯವನ್ನು ಉಪಮೇಯಕ್ಕೆ ಹೋಲಿಸುವುದನ್ನು ಕಾಣಬಹುದು ; ಉಪಮೇಯವು ಹೋಲಿಸಿಕೊಳ್ಳುವ ಪ್ರತ್ಯಕ್ಷ ವರ್ಣ್ಯವಸ್ತು (ಪದ)ವಾದರೆ ಉಪಮಾನವು ಉಪಮೇಯವನ್ನು ಹೋಲಿಸುವ ಅಪ್ರತ್ಯಕ್ಷ , ಅಗೋಚರ,ಕಲ್ಪನೆಗೆ-ಭಾವನೆಗೆ, ಅನುಭವಕ್ಕೆ ವೇದ್ಯವಾದ ವರ್ಣವಸ್ತು (ಪದ)ವಾಗಿರುತ್ತದೆ .
ಒಟ್ಟಿನಲ್ಲಿ ಉಪಮಾಲಂಕಾರವು “ಉಪಮಾನ, ಉಪಮೇಯ, ಸಮಾನ ಧರ್ಮ ಮತ್ತು ಉಪಮಾವಾಚಕಪದ ” ಈ ನಾಲ್ಕೂ ಅಂಶಗಳಿಂದ ಕೂಡಿರುತ್ತದೆ .( ಉಪಮವಾಚಕ ಪದಗಳು – ಅಂದದಿ,ಹಾಗೆ,ಅಂತೇ, ಅಂತೀರೇ, ವೋಲ್ ,ಅಂತೆವೋಲ್ ,ಮುಂತಾದವುಗಳು)
ಅರ್ಥಾಲಂಕಾರಗಳು ಉದಾಹರಣೆ : “ದಸರಾ ಕಾಲದಲ್ಲಿ ಮೈಸೂರು ಇಂದ್ರನ ಅಮರಾವತಿಯಂತೆ ಝುಗಝುಗಿಸುತ್ತದೆ “
ಲಕ್ಷಣ – ಉಪಮಾನ-ಇಂದ್ರನ ಅಮರಾವತಿ
ಉಪಮೇಯ – ಮೈಸೂರು
ಸಮಾನಧರ್ಮ -ಝುಗಝುಗಿಸುವದು
ಉಪಮವಾಚಕಪದ -ಅಂತೆ
‘ಅಂತೆ’ ಎಂದು ಬಂದಿರುವುದರಿಂದ ಇದು ಉಪಮಾಲಂಕಾರ .
೨) ರೂಪಕಾಲಂಕಾರ
ರೂಪಕಾಲಂಕಾರವೆಂದರೆ ‘ರೂಪಣ ‘ ಉಳ್ಳದು ‘ರೂಪಕ ‘. ಉಪಮಾನ ಉಪಮೇಯಗಳು ಎರಡು ಒಂದೇ ಎಂದು ತಾದ್ರೂಪ್ಯ ಅಥವಾ ಅಭೇದ ಕಲ್ಪಿಸುವೆ ‘ರೂಪಕಾಲಂಕಾರ’ವೆನಿಸುವುದು .
ಉದಾ:”ವಿರೋಧಿಬಲಾಂಬುರಾಶಿಯಂ “
ಲಕ್ಷಣ – ಉಪಮಾನ -ಅಂಬುರಾಶಿ
ಉಪಮೇಯ – ವಿರೋಧಿ ಬಲ
ಹೀಗೆ ‘ವಿರೋದಿಬಲವನ್ನೇ ಅಂಬುರಾಶಿ ‘ ಎಂದು ಅಭೇದ ಕಲ್ಪಿಸಿರುವುದರಿಂದ ಇದು ರೂಪಕಾಲಂಕಾರ
೩) ಉತ್ಪ್ರೆಕ್ಷಾಲಂಕಾರ
ಒಂದು ವಸ್ತುವನ್ನು ಅದಕ್ಕೆ ಸಮನಾದ ಗುಣಧರ್ಮವುಳ್ಳ ಮತ್ತೊಂದು ವಸ್ತುವೆಂದು ಊಹಿಸುವದು ಅಥವಾ ಕಲ್ಪಿಸುವುದು ಅಥವಾ ಸಂಭವಿಸುವುದು ‘ಉತ್ಪ್ರೇಕ್ಷ’ .
ಇದು ಉಪಮಾಲಂಕಾರದಂತೆ ಕಾಣುತ್ತದೆಯಾದರು ಅದರಲ್ಲಿಯ ನಿಶ್ಚಿತತೆಯು ಇದರಲ್ಲಿ ಇರದೇ ‘ಊಹೆ’ ಇರುತ್ತದೆ .
ಉದಾ: ಆ ಸೇನಾ ರಜದಿಂ ಪರಿ ।
ಧುಸರಮಾದೂದು ನಿಜಾ೦ಗಮಂ ತೊಳೆಯಲ್ಕೆ೦।।
ದೋಸರಿಸದೆ ಪೊಕ್ಕಂತಿರೆ ।
ವಾಸರಕಾರಣಪರವಾರಿನಿಧಿಯೊಳ್ ಪೊಕ್ಕಂ ।।
ಲಕ್ಷಣ – ಸಹಜವಾಗಿ ಮುಳುಗಿದ ಸೂರ್ಯನನ್ನು ಸ್ನಾನಕ್ಕೋಸುಗ ಪಚ್ಛಿಮ ವಾರಿಧಿಯಲ್ಲಿ ಮುಳುಗಿದನೆಂದು ಕವಿಯು (ಕಲ್ಪಿಸಿ) ಊಹಿಸಿರುವನು . ಇಲ್ಲಿ ಉಪಮೇಯವನ್ನು ಉಪಮಾನವನ್ನಾಗಿ ಊಹಿಸಲಾಗಿದೆ . ಸಾಯಂಕಾಲ ಮುಳುಗುತ್ತಿರುವ ಕೆಂಪಾಗಿದ್ದು , ಪಶ್ಚಿಮ ದಿಕ್ಕಿನಲ್ಲಿ ಅವನು ಮರೆಯಾಗುತ್ತಾನೆ . ಸೇನೆಯ ತುಳಿದಾಟದಿಂದೆದ್ದ ಧೂಳು ,ಅದು ಮೆಟ್ಟಿ ಕೆಂಪಾದ ಮೈ ,ಪಶ್ಚಿಮ ಸಮುದ್ರದಲ್ಲಿ ಕಾಣದಾಗುವ ಸನ್ನಿವೇಶ ,ಇದರಲ್ಲಿ ಉಪಮಾನ ಉಪಮೇಯ ಎರಡರಲ್ಲಿಯೂ ಸಮಾನ ಗುಣಧರ್ಮಗಳಾಗಿ ಊಹಿಸಲಪಟ್ಟಿವೆ .
೪) ದೃಷ್ಟಾಲಂಕಾರ
ದೃಷ್ಟಾಲಂಕಾರವೆಂದರೆ ಎರಡು ಬೇರೆ ಬೇರೆ ವಾಕ್ಯಗಳು (ಸಂಗತಿಗಳು) ಅರ್ಥ ಸಾದೃಶ್ಯದಿಂದ ಒಂದನೊಂದು ಬಿಂಬ-ಪ್ರತಿಬಿಂಬಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಲಂಕಾರ ಎನಿಸುವುದು .
ಉದಾ: * ಊರು ಉಪಕಾರ ಅರಿಯದು , ಹೆಣ ಶೃಂಗಾರ ಅರಿಯದು.
*ಅಟ್ಟಮೇಲೆ ಓಲೆ ಉರಿಯಿತು , ಕೊಟ್ಟಮೇಲೆ ಅಳಿಯ ಉರಿದ .
*ಮಾತು ಬಲ್ಲವನಿಗೆ ಜಗಳವಿಲ್ಲ , ಊಟಬಲ್ಲವನಿಗೆ ರೋಗವಿಲ್ಲ .
ಲಕ್ಷಣ – ಮೇಲಿನ ಪ್ರತಿಯೊಂದು ಮಾತಿನಲ್ಲಿ ಎರಡೆರಡು ಮಾತುಗಳು ಅರ್ಥಸಾದೃಶ್ಯದಿಂದ ಪರಸ್ಪರ ಬಿಂಬ-ಪ್ರತಿಬಿಂಬಗಳಂತೆ ಕಾಣುತ್ತವೆ. ಹೀಗೆ ವರ್ಣಿಸುವ ವಿಷಯಕ್ಕೆ ,ಬೇರೊಂದು ವಿಷಯದ ದೃಷ್ಟಾಂತವು ಪ್ರತಿಬಿಂಬದ ಹಾಗೆ ಕಾಣುತ್ತದೆ.
೫) ಅರ್ಥಾ೦ತರನ್ಯಾಸಾಲಂಕಾರ
ಅರ್ಥಾ೦ತರನ್ಯಾಸಾಲಂಕಾರ ಎಂದರೆ ಸಾಮಾನ್ಯ ಸಂಗಾತಿಯಿಂದ ವಿಶೇಷ ಸಂಗತಿಯನ್ನು, ಇಲ್ಲವೇ ವಿಶೇಷ ಸಂಗಾತಿಯಿಂದ ಸಾಮಾನ್ಯ ಸಂಗತಿಯನ್ನು ಸಮರ್ಥನೆ ಮಾಡುವದೇ ‘ಅರ್ಥಾ೦ತರನ್ಯಾಸಾಲಂಕಾರ’ ಎನಿಸುವುದು.
ಸಾಮಾನ್ಯ ಸಂಗತಿ – ‘ಬಹುಜನರಿಗೆ ಸಂಬಂದಿಸಿದ ಸಾರ್ವತ್ರಿಕ ವಿಷಯ’
ವಿಶೇಷ ಸಂಗತಿ- ‘ಒಬ್ಬ ವ್ಯಕ್ತಿಗೆ ಸಂಬಂದಿಸಿದ ವಿಷಯ ‘
ಉದಾ: “ಗುಣಿಗಳ ಗೆಳೆತನದಿಂದ ಅಲ್ಪನಿಗೂ ಅಧಿಕ್ಯ ಬರುವದು ;ಹೂವಿನಿಂದ ನಾರು ಸ್ವರ್ಗ ಸೇರುವದಿಲ್ಲವೇ?”
ಲಕ್ಷಣ – ಗುಣಿಗಳ ಗೆಳೆತನದಿಂದ ಅಲ್ಪನು ಅಧಿಕ್ಯ ಹೊಂದುವದು ಸಾಮಾನ್ಯ ಸಂಗತಿ . ಅದರಂತೆ ಹೂಮಾಲೆಯ ಮೂಲಕ ನಾರು (ದಾರ) ದೇವರ ಪೂಜೆಗೆ ಅರ್ಹವಾಗಿ ಸ್ವರ್ಗ ಕಾಣುವ -ಅಂದರೆ ಗೌರವಸ್ಥಾನ ಹೊಂದುವ – ವಿಶೇಷ ಸಂಗಾತಿಯಾದ್ದರಿಂದ ಇದು ‘ಅರ್ಥಾ೦ತರನ್ಯಾಸಾಲಂಕಾರ’ ಎನಿಸುವುದು.
೬) ಶ್ಲೇಷಾಲಂಕಾರ
ಶ್ಲೇಷಾಲಂಕಾರ ಅನೇಕಾರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವರ್ಣ್ಯವಾದ ವಿಷಯಗಳ ಪರವಾಗಿ ಬೇರೆ ಅರ್ಥ ಕೊಡುವದೇ ‘ಶ್ಲೇಷಾಲಂಕಾರ’ ಎನಿಸುವುದು . ಈ ಅಲಂಕಾರದಲ್ಲಿ ಶಬ್ದಗಳು ಒಡೆದು ಬೇರೆ ಬೇರೆ ಅರ್ಥ ಹೇಳುವುದುಂಟು .ಅಥವಾ ಒಡೆಯದೆ ಬೇರೆ ಬೇರೆ ಅರ್ಥ ಹೇಳುವುದುಂಟು .
ಇದೆ ಅಲಂಕಾರವನ್ನು ಹೀಗೂ ಹೇಳುತ್ತಾರೆ: “ಭಿನ್ನಾರ್ಥಗಳಾಗುವಂತೆ ಒಂದೇ ಶಬ್ದ ರಚನೆಯನ್ನುಳ್ಳ ಅನೇಕ ವಸ್ತುಗಳನ್ನು ವರ್ಣಿಸುವುದನ್ನು ‘ಶ್ಲೇಷಾಲಂಕಾರ’ ಎನ್ನುವರು.
ಉದಾ: ತುಂ-ತುಂ , ತುಂ-ತುಂ , ತುಂ-ತುಂ ,ತುಂ-ತುಂ
ತುಂಬಿ ಬಂದಿತ್ತ.. ತಂಗೀ, ತುಂಬಿ ಬಂದಿತ್ತು ।।
೭) ಉಲ್ಲೇಖಲಂಕಾರ
ಒಂದು ವಸ್ತು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕಂಡು ಬರುತ್ತಿದ್ದರೆ ಅದು ‘ಉಲ್ಲೇಖಾಲಂಕಾರ’ ಎನ್ನುವರು .
ಉದಾ: ಅರಸುಗಳಿಗಿದು ವೀರ ಬುಧರಿಗೆ ।
ಪರಮವೇದದ ಸಾರ ಯೋಗಿ ।
ಶ್ವರರ ತತ್ತ್ವ ವಿಚಾರ ಮಂತ್ರಿ ಜನಕ್ಕೆ ಬುದ್ಧಿಗುಣ ।।
ವಿರಹಿಗಳ ಶೃಂಗಾರ ವಿದ್ಯಾ|
ಪರಿಣತಾಲಂಕಾರ ಕಾವ್ಯಕ್ಕೆ ।
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ।।
ಲಕ್ಷಣ – ಈ ಪದ್ಯದಲ್ಲಿ ಕುಮಾರವ್ಯಾಸನು ರಚಿಸಿದ ಭಾರತವು ಬೇರೆ ಬೇರೆ ವರ್ಗದ ಜನರಿಗೆ ಬೇರೆ ಬೇರೆ ಮಹತ್ವಗಳಿಂದ ಕಾಣಿಸುತ್ತಿರುವುದನ್ನು ಕವಿಯು ಉಲ್ಲೇಖಿಸಿ ವರ್ಣಿಸಿದ್ದಾನೆ. ಆದುದರಿಂದ ಇದು ‘ಉಲ್ಲೇಖಾಲಂಕಾರ’ ಎನಿಸುವುದು .
೮) ಸ್ವಭಾವೋಕ್ತಿ ಅಲಂಕಾರ
ಸ್ವಭಾವೋಕ್ತಿ ಅಲಂಕಾರ ಎಂದರೆ ವಸ್ತುಗಳ ಜಾತಿ,ಗುಣ,ಕ್ರಿಯೆ, ಮೊದಲಾದವನ್ನು ಇದ್ದಕಿದ್ದಂತೆ ನೈಜವಾಗಿ ,ಸುಂದರವಾಗಿ , ಬಣ್ಣಿಸುವದೇ ‘ಸ್ವಭಾವೋಕ್ತಿ ಅಲಂಕಾರ’ ಎನ್ನುವರು.
ಉದಾ: ಉಬ್ಬಿದುರದೇರದೇಗೆದೊಡಲ ಬಾಗಿದ ಬೆನ್ನ ।
ಹಬ್ಬುಗೆಯ ಪಚ್ಚಳದ ಸೆಳೆದ ಬಾಲದ ಬೆನ್ನ ।
ಕೊಬ್ಬಿದ ಕೊರಳ ಸಣ್ಣ ಜಂಘೆಗಳ ಕೊಂಕುಗುರ ಮಡಿಗಿವಿಯ ಕಿಡಿಗಣ್ಗಳ ।।
ಹೆಬ್ಬಳ್ಳವಿದುವಾಯಾ ಜೋಲ್ವ ಕೆನ್ನಾಲಗೆಯ ।
ಗಬ್ಬಿನಾಯ್ಗಳ ಹಾಸನುಗಿದು ಬಿಡೆ ಪಂದಿಗಳ ।
ನಬ್ಬರಿಸಿ ತುಡುಕಿದವು ।।
ಲಕ್ಷಣ -ಈ ಪದ್ಯದಲ್ಲಿ ಬೇಟೆನಾಯಿಗಳ ಜಾತಿವರ್ಣನೆಯು ಸಹಜಸುಂದರವಾಗಿದೆ.
೯) ವಿರೋಧಾಭಾಸಅಲಂಕಾರ
ವಿರೋಧಾಭಾಸಅಲಂಕಾರ ಎಂದರೆ :ಆಭಾಸ=ತಿಳುವಳಿಕೆ. ವಸ್ತುತಃ ವಿರೋಧವಿಲ್ಲದಿದ್ದರು ವಿರೋಧವಿದ್ದಂತೆ ಅಭಾಸ ಆಗುವುದು .ಇದು ಬಹುಮಟ್ಟಿಗೆ ಶ್ಲೇಷಾಲಂಕಾರ ಗತ ವಾಗಿರುತ್ತದೆ.
ಉದಾ: ಎಲ್ಲರುಂ ಭೋಗಿಗಳ್ ಪಾತಾಳಗತರೆನಿಸ ।
ರೇಲ್ಲೂರು೦ ವಿದ್ಯಾಧರರ್ ನಭೋಜನರೆನಿಸ ।
ರೇಲ್ಲೂರು೦ ದಾಕ್ಷಿಣ್ಯವರ್ತಿಗಳ್ತಿಳಿಯೆ ಲಂಕಾನಿವಾಸಿಗಳೆನಿಸರು ।।
ನಿಮಗಿದು ಕೂಡ ತಿಳಿದಿರಲಿ